Sunday, September 20, 2015



Directed byDuniya Soori
Produced byParimala Film Factory
Screenplay byDuniya Soori
Rajesh Nataranga
Story bySurendranath
StarringVikky
Manvitha Harish
Music byV. Harikrishna
CinematographySatya Hegde

ಸೂರಿ ಸಿನೆಮಾ ತೆಗೆಯೋ ಶೈಲಿಗೆ ನಾನು ಮೊದಲಿಂದಲೂ ಬಹಳಾ ದೊಡ್ಡ ಅಭಿಮಾನಿ . ಇಂತಿ ನಿನ್ನ ಪ್ರೀತಿಯ ನಂತರ ಸೂರಿ ತಮ್ಮ ದಾರಿ ಶೈಲಿ ಛಾಪು ಎಲ್ಲದರಲ್ಲೂ ದಿಕ್ಕು ಬದಲಿಸೋದನ್ನ ಇರೋದನ್ನ ಜಂಗ್ಲಿ - ಜಾಕೀ - ಅಣ್ಣಾ ಬಾಂಡ್ ಚಿತ್ರಗಳ ಮೂಲಕ ಹಂತ ಹಂತವಾಗಿ ಗಮನಿಸಿ ಸ್ವಲ್ಪ ಬೇಸರವಾಗಿದ್ದು ನಿಜ.  ಕಡ್ಡಿ ಪುಡಿ ನೋಡಿ, ಮತ್ತೆ ಹಳೆ ಸೂರಿಯ ಛಾಪು ಕಂಡಿತ್ತಾದರೂ ಆ ಚಿತ್ರದಲ್ಲಿ ರಕ್ತ ಚರಿತ್ರ ಸಿನೆಮಾದ ಘಮ ಆಡಿದ್ದರಿಂದ ಕನ್ನಡ ಚಿತ್ರ ಪ್ರೇಕ್ಷಕಳಾಗಿ ಸ್ವಾಭಿಮಾನ ಸ್ವಲ್ಪ ಕುಗ್ಗಿತ್ತು .

ಕೆಂಡಸಂಪಿಗೆ ೫ ಭಾಗಗಳಲ್ಲಿ ಮೂಡಿಬರಲಿರುವ ಹೊಸ ಪ್ರಯೋಗದ ಬಗ್ಗೆ ಕೇಳಿದ ದಿನದಿಂದ ಚಿತ್ರದ ಬಿಡುಗಡೆಗೆ ಕಾದಿದ್ದೆ .
ಭಾಗ ೨ - ಗಿಣಿ ಮರಿ ಕೇಸ್  ಮೊದಲು ತೆರೆಗೆ ಬಿಟ್ಟು ಅದರಲ್ಲಿ ಭಾಗ ೧ - ಕಾಗೆ ಬಂಗಾರಕ್ಕೆ ಕೆಲವು ಲಿಂಕ್ ಗಳನ್ನು ಅದರಲ್ಲಿರಿಸಿದ್ದಾರೆ . ಇದರಿಂದ ಮುಂದ ಬರಲಿರುವವ ಭಾಗದ ಬಗ್ಗೆ  ಹೆಚ್ಚು ಕುತೂಹಲ ಮೂಡುವುದು ಖಂಡಿತ .

ಸಿನೆಮಾದಲ್ಲಿ ಹಾಡುಗಳಿದ್ದರೂ ಕಾಲಾವಧಿ ಕೇವಲ ಒಂದೂ ಮುಕ್ಖಾಲು ಘಂಟೆಗಳಷ್ಟೇ ! ಎಸ್ ಸುರೇಮ್ದ್ರನಾಥ್ ಅವರು ಬರೆದ ಕಥೆಯನ್ನಾಧಾರಿಸಿದ ಈ ಚಿತ್ರ ಇತರೆ ಕಮರ್ಷಿಯಲ್ ಸಿನೆಮಾದವರ ಕಯ್ಯಿಗೆ ಸಿಕ್ಕಿದ್ದರೆ ಸಲೀಸಾಗಿ ಇನ್ನೂ ಒಂದು ಘಂಟೆ ಮೈ ಕಯ್ಯಿ ತುಂಬಿಕೊಂಡು ನೀರಸವಾಗಿ ನಮಗೆಲ್ಲ ಖಂಡಿತಾ ನಿರಾಸೆಯಾಗಿರುತಿತ್ತು . ಒಬ್ಬ ಒಳ್ಳೆಯ ನಿರ್ದೇಶಕನಿಗೆ ಸಿನಿಮಾ ಹೇಗೆ ಶುರು ಆಗಬೇಕು ಮತ್ತು ಯಾವಾಗ ಅಂತ್ಯವಾಗಬೇಕು ಅನ್ನೋದರ ಬಗ್ಗೆ ಸ್ಪಷ್ಟ ಆಲೋಚನೆ ಇರುತ್ತೆ . ಅದು ಸೂರಿಗೆ ಖಂಡಿತಾ ಇದೆ ಅನ್ನೋದು ಈ ಚಿತ್ರದಲ್ಲಿ ಎದ್ದು ಕಾಣುತ್ತದೆ. ಸಾಮಾನ್ಯ ಜನರಲ್ಲಿ ಇರಲಾರದ ಕೆಲ ಅಚ್ಛರಿಗೊಳಿಸುವ ಸಾಮಾಜಿಕ ಮಾಹಿತಿ - ಅಂಶಗಳನ್ನು ಸುಂದರ ಪ್ರೇಮಿಗಳ ಕಥೆಯಲ್ಲಿ ಬೆರೆಸಿ ಬಡಿಸುವ ಚಿತ್ರ ಗಿಣಿ ಮರಿ ಕೇಸ್. 

ಸರಳ ಸಾಧಾರಣವಾಗಿಯೇ ಇರುವ ಚಿತ್ರೀಕರಣದಲ್ಲಿ ಅದ್ಭುತ ದ್ರುಶ್ಯಾನುಭವ ನೀಡುವ ಸೂರಿಯಾ ಛಾಪು ಬೆಳ್ಳಿ ತೆರೆಗೆ ಮರಳಿರುವುದು ಸಂತಸದ ವಿಷಯ. 
ಹೊಸ ಪ್ರತಿಭೆಗಳಾದ ವಿಕ್ಕಿ ಮತ್ತು ಮಾನ್ವಿತ ತಮ್ಮ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ವದಗಿಸಿದ್ದು ರಾಜೇಶ್ ನಟರಂಗ ಹಾಗು ಶೀತಲ್ ಶೆಟ್ಟಿ ಪೋಷಕ ನಟರಾಗಿ ಕಥೆಗೆ ಬೆನ್ನೆಲುಬಾಗಿ ನಿಂತಿದ್ದಾರೆ . 
ನಾಲ್ಕೇ ಹಾಡುಗಳಿದ್ದರೂ ಅದ್ಭುತವಾಗಿ ಸಂಯೋಜಿಸಿರುವ  ಹರಿ ಕೃಷ್ಣ ಅವರ ಮಿಕ್ಕೆಲ್ಲ ಸಿನಿಮಾ ಹಾಡುಗಳಿಗಿಂತ ವಿಭಿನ್ನವಾದ ಶೈಲಿ ಸಾಮರ್ಥ್ಯ ತೆರೆದಿಟ್ಟಿದ್ದಾರೆ . 
ಕಥೆಗೆ ಪೂರಕವಾಗಿರುವ ಹಾಡುಗಳ ಲಿರಿಕ್ಸ್ ಮತ್ತೆ ಮತ್ತೆ ಕೇಳುವಂತೆ ಮಾಡುವಷ್ಟು ಆಳವಾಗಿವೆ . 
ನೂರು ನಿಮಿಷಗಳಲ್ಲಿ ಕರ್ನಾಟಕದ ಏಳು ಜಿಲ್ಲೆಗಳನ್ನು ಅತಿ ರಮ್ಯವಾಗಿ ಸೆರೆ ಹಿಡಿದಿರುವ ಸತ್ಯ ಹೆಗ್ಡೆ , ಅತ್ತಿತ್ತ ಅಲುಗದಷ್ಟು ಹಿಡಿದಿಡುವ ಕಥೆಯನ್ನು ಬಿಡಿಸಿರುವ ಸುರೇಮ್ದ್ರನಾಥ್ ಇಬ್ಬರೂ ಚಿತ್ರದ ಯಶಸ್ಸಿಗೆ ಸಮಾನವಾಗಿ ಕಾರಣರಾಗಿದ್ದಾರೆ . 

ಈ ಚಿತ್ರವನ್ನ ನೀವು ಯಾಕೆ ನೋಡಲೇ ಬೇಕು -
  • ಕಲಾವಿದರು ತಂತ್ರಜ್ಞರು ಹಾಡು ಸಂಭಾಷಣೆ ಚಿತ್ರೀಕರಣ ಎಲ್ಲವೂ ಸಂಪೂರ್ಣವಾಗಿ ಕರ್ನಾಟಕ ಕನ್ನಡ ಹಾಗು ಕನ್ನಡಿಗರನ್ನೇ ಒಳಗೊಂಡಿದೆ 
  • ಪ್ರೇಕ್ಷಕನ ಸಮಯಕ್ಕೆ ಬೆಲೆ ಕೊಟ್ಟು ಶುದ್ಧ ಮನೋರಂಜನೆಯನ್ನು ಮಾತ್ರ ಒಳಗೊಂಡ ಚಿತ್ರ 
  • ಇದಾಗಲೇ ತಿಳಿಸಿರುವ ಹಾಗೆ ಒಟ್ಟು ಐದು ಭಾಗಗಳಿರುವ ಕೆಂಡಸಂಪಿಗೆ ಪ್ರತಿ ಕಥೆಯಲ್ಲೂ ಇನ್ನೊಂದು ಕಥೆಗೆ ಲಿಂಕ್ ಹೊಂದಿದೆ 
  • ಇಡೀ ಭಾರತ ಚಿತ್ರರಂಗದಲ್ಲೇ ಇದೊಂದು ಹೊಚ್ಚ ಹೊಸ ಪ್ರಯೋಗವಾದ್ದರಿಂದ ಆರಂಭದಿಂದಲೇ ನೀವು ಇದನ್ನು ಪ್ರೋತ್ಸಾಹಿಸಿದಿರಿ ಎಂಬ ತೃಪ್ತ ಭಾವಕ್ಕೆ