Tuesday, August 18, 2015



ಏಳು ಬೇಳುಗಳನೆಲ್ಲ ಸಮನಾಗಿ ಕಾಣಬಲ್ಲ ಉಪೇಂದ್ರ, ಬೆಳೆದು ಬಂದ ಹಾದಿ ಅನ್ನೋಕ್ಕಿಂತ - ನಡೆದು ಬಂದ ಹಾದಿಯನ್ನು ಗಮನಿಸಿದರೆ ಇವರು REAL STAR ಯಾಕೆ ಅನ್ನೋದು ಅರ್ಥವಾಗುತ್ತೆ . ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಯುವಕನಾದಾಗಿನಿಂದ ಒಬ್ಬ ಗೃಹಸ್ತನಾಗಿ ಜವಾಬ್ದಾರಿಗಳನ್ನ ನಿಭಾಯಿಸುವ ವರೆಗೂ ತಾನು ಕಂಡುಕೊಂಡ ಸತ್ಯಾಸತ್ಯಗಳನ್ನ ಬಗೆ ಬಗೆಯಾಗಿ ತಮ್ಮ ಪ್ರತಿಯೊಂದು ಸಿನೆಮಾದಲ್ಲಿಯೂ ಪ್ರೇಕ್ಷಕರ ಮಡಿಲಿಗೆಸೆದಿದ್ದಾರೆ .

ಉಪ್ಪಿ2 ನೋಡಿದರೆ ಅವರ ಇಂದಿನ ಐಶಾರಾಮಿ ಜೀವನಶೈಲಿಯ ನಡುವೆಯೂ ಅವರನ್ನು ಆಧ್ಯಾತ್ಮಿಕವಾಗಿ ಕಾಡಿರುವ ಕೆಲ ಸಾಮಾನ್ಯ ತರ್ಕಗಳು - ಅವುಗಳಿಗೆ ಅವರು ಕಂಡುಕೊಂಡಿರುವ ಉತ್ತರಗಳು ಎಲ್ಲವೂ ಸಿಗುತ್ತದೆ.

ಉಪೇಂದ್ರ ಸಿನೆಮಾದಲ್ಲಿ ಪ್ರಧಾನ ಪಾತ್ರವಾದ "ನಾನು" ಸುತ್ತಲೂ ಪ್ರಶ್ನೆಗಳು - ಗೊಂದಲಗಳು ಹೆಚ್ಚಿವೆ , ಹಾಗಾಗಿಯೇ ಪ್ರೇಕ್ಷಕರಿಗೆ ಅದು ಹೆಚ್ಚು ಮನೋರಂಜನೆ ನೀಡಲು ಸುಲಭವಾಗಿತ್ತೋ ಏನೋ . ಉಪ್ಪಿ 2 ಸಿನೆಮಾದಲ್ಲಿ ಪ್ರಧಾನ ಪಾತ್ರವಾದ "ನೀನು" - ಉತ್ತರಗಳನ್ನು ಬಲ್ಲವನಾಗಿರೋದಿರಿಂದಲೋ ಏನೋ , ಮೊದಲ ಅರ್ಧ ಸಿನೆಮಾ ವೇಗ ತಪ್ಪಿದಂತನಿಸುತ್ತದೆ .

ತಮ್ಮ ಅಭಿಮಾನಿಗಳನ್ನ ಆಳವಾಗಿ ಅರ್ಥ ಮಾಡ್ಕೊಂಡಿರೋ ಉಪ್ಪಿ , ಹಾಡಲ್ಲಿ ಹೀಗಂತಾರೆ -

"ಕುತ್ತೆ ಥರ ನೀಯತ್ತಿಂದ ಕತ್ತೆ ಥರ ಕೆಲಸ ಮಾಡೊ ನಂಗೆ , ಪ್ರಾಣ ಒತ್ತೆ ಇಟ್ಟು , ಅಭಿಮಾನ ಅನ್ನೋ ಮತ್ತಲ್ಲಿ ನಿರೀಕ್ಷೆ ಅನ್ನೋ ಬೆಟ್ಟ ಹಿಡ್ಕೊಂಡು ಕಾದು , ನಾನಾಡೋ ಮಾತಲ್ಲಿ ಮುತ್ತು ಹುಡ್ಕಿ ಅದನ್ನ ಲೈಫ್ ಅಲ್ಲಿ ಮೆತ್ಕೊಂಡು , ಕತ್ತೆತ್ಕೊಂಡು ಓಡಾಡೊ ಸ್ವಾತಿ ಮುತ್ತಿನಂಥ ಸಕ್ಕತ್ ಸ್ವಾಭಿಮಾನಿಗಳು "

ಅವರು ಹೇಳಿರೋ "ಬೆತ್ತ ಹಿಡಿದು ಕಾಯೋ" ಅಭಿಮಾನಿಗೆ ರುಚಿಸದ ಕೆಲ ಅಂಶಗಳು -
ಒಂದೆರೆಡು ಹಾಡು ಬಿಟ್ಟರೆ ,ಈ ಬಾರಿ ಗುರು ಕಿರಣ್ ಅವರ ಮೋಡಿ ಸಪ್ಪೆಯಾಗಲು , ನಿರೀಕ್ಷಿಸಿದಷ್ಟು ಸ್ವಾರಸ್ಯವಿಲ್ಲದ ಲಿರಿಕ್ಸ್ ಕೂಡ ಕಾರಣವಿರಬಹುದು. ಪ್ರೇಕ್ಷಕನನ್ನ ಹಿಡಿದಿಡಲು ಉಪ್ಪಿಗೆ ಹಿಂದೆಂದೂ ನಾಯಕಿಯರ ನೆರವು ಬೇಕಿರಲಿಲ್ಲ , ಆದರೆ ಈ ಸಿನಿಮಾದಲ್ಲಿ ಆ ಪ್ರಯತ್ನವೂ ನಡೆಸಿದಂತೆ ತೋರುತ್ತದೆ . ಖರ್ಚು ಮಾಡಲು ಗಿಂಜುವ ನಿರ್ಮಾಪಕರಿಂದ ಉಪ್ಪಿಯಂತಹ ನಿರ್ದೇಶಕನ ಕಲೆಗೆ ಕಡಿವಾಣವಾಯ್ತು ಅನ್ಕೊಂಡ ಅಭಿಮಾನಿಗಳು ಈ ಬಾರಿ ಅವರದೇ ನಿರ್ಮಾಣದ ಸಿನಿಮಾದಲ್ಲಿ ಇನ್ನೂ ಹೆಚ್ಚು ಹೆಚ್ಚು ಪ್ರಯೋಗಗಳನ್ನ ಅಪೇಕ್ಷಿಸಿದ್ದರು . ಅಲ್ಲಿಯೂ ನಿರೀಕ್ಷೆಗೆ ಸ್ವಲ್ಪ ನಿರಾಶೆಯೇ !

ತಮ್ಮ ಸಿನೆಮಾನ ತಾವೇ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಹತ್ತು ಹಲವು ಬಾರಿ ವಿಶ್ಲೇಷಿಸುವ ಅಭ್ಯಾಸವಿರೋ ಉಪೇಂದ್ರ ಅವರಿಗೂ ಇವೆಲ್ಲಾ ತಿಳಿದಿದ್ದರಿಂದಲೇ ಬಹುಷಃ ಪೋಸ್ಟರ್ ಗಳಲ್ಲಿ "Expectation is injurious to health!" ಅಂತ ಹಾಕಿದ್ದಾರೆ, ಅದರ ಒಳ ಅರ್ಥ ಸಿನೆಮಾದ ವಿಷಯಕ್ಕೂ ಸಹ ಹೊಂದೋದರಿಂದ ಇದು ಮತ್ತದೇ 2D ಗಿಮಿಕ್ ಆಗಿ ಪರಿಣಮಿಸಿದೆ .

ಉಪ್ಪಿ 2 ಚಿತ್ರ ಉಪೇಂದ್ರ ಚಿತ್ರದ "ಏನಿಲ್ಲ ಏನೇನಿಲ್ಲ " ಹಾಡಿನ ಸಾಲಿನಂತೆ .
ಪಾತ್ರಗಳನ್ನು ಒಂದು ಕಥೆಗೆ ನಿಲುಕಿಸಿ ನೋಡೋ ಸಾಮಾನ್ಯ  (ಉಪೇಂದ್ರ ಅವರ ಹಿಂದಿನ ಚಿತ್ರಗಳನ್ನು ಅರ್ಥೈಸಿಕೊಳ್ಳದ/ ಅರ್ಥೈಸಿಕೊಳ್ಳಲಾರದ) ಪ್ರೇಕ್ಷಕನಿಗೆ ಇದು ಬಹಳಾ ಸಪ್ಪೆ ಸಿನೆಮಾ ಅಂತ ಭಾಸವಾಗುತ್ತೆ .
ಉಪೇಂದ್ರ , ಆಪರೇಶನ್ ಅಂತ , H2O ಅಂತಹಾ ಸಿನೆಮಾಗಳನ್ನ ಪದೇ ಪದೇ ನೋಡಿ ಅದರ ವಿವಿಧ ದ್ರಿಷ್ಟಿ ಕೋನಗಳನ್ನು ಸವಿದವರಿಗೆ ಉಪ್ಪಿ 2 ಹೇಳ ಬಯಸುವ ಎರೆಡನೇ ಆಯಾಮದ ಒಳ ಅರ್ಥಗಳು ಕಾಡಿ ಕಾಡಿ ಅವರನ್ನು ಮತ್ತೆ ಮತ್ತೆ ಚಿತ್ರ ವೀಕ್ಷಿಸುವಂತೆ ಒತ್ತಾಯಿಸುತ್ತದೆ .

ಹೇಗೆ ಒಬ್ಬ ಕವಿಯ ಕಾವ್ಯ , ಕಲೆಗಾರನ ಚಿತ್ರಕಲೆ ಪ್ರೇಕ್ಷಕನಿಗೆ ತನ್ನದೇ ಆದ ಅರ್ಥ ಕಲ್ಪಿಸಿಕೊಳ್ಳುವ ಅಥವಾ ಕಂಡುಕೊಳ್ಳುವ ಸ್ವಾರಸ್ಯ ನೀಡುತ್ತವೆಯೋ ಹಾಗೇ ಉಪ್ಪಿ 2 ಪ್ರೇಕ್ಷಕರ ಕ್ರಿಯಾಶೀಲತೆ ಹಾಗು ಯೋಚನಾಶಕ್ತಿಗೆ ತನ್ನ ಭಾವಾರ್ಥ ಕಂಡುಕೊಳ್ಳುವ ಅವಕಾಶ ನೀಡಿದೆ . ಚಿತ್ರ ಗೆದ್ದರೂ ಸೋತರೂ ಇದರ ನಿಜವಾದ ಮಜಾ ಅನುಭವಿಸುವ ಉಪೇಂದ್ರ ಅಭಿಮಾನಿಗಳಿಗೆ ದಕ್ಕಬೇಕಾದ thrill ದಕ್ಕೆ ದಕ್ಕುತ್ತದೆ .