Sunday, September 20, 2015



Directed byDuniya Soori
Produced byParimala Film Factory
Screenplay byDuniya Soori
Rajesh Nataranga
Story bySurendranath
StarringVikky
Manvitha Harish
Music byV. Harikrishna
CinematographySatya Hegde

ಸೂರಿ ಸಿನೆಮಾ ತೆಗೆಯೋ ಶೈಲಿಗೆ ನಾನು ಮೊದಲಿಂದಲೂ ಬಹಳಾ ದೊಡ್ಡ ಅಭಿಮಾನಿ . ಇಂತಿ ನಿನ್ನ ಪ್ರೀತಿಯ ನಂತರ ಸೂರಿ ತಮ್ಮ ದಾರಿ ಶೈಲಿ ಛಾಪು ಎಲ್ಲದರಲ್ಲೂ ದಿಕ್ಕು ಬದಲಿಸೋದನ್ನ ಇರೋದನ್ನ ಜಂಗ್ಲಿ - ಜಾಕೀ - ಅಣ್ಣಾ ಬಾಂಡ್ ಚಿತ್ರಗಳ ಮೂಲಕ ಹಂತ ಹಂತವಾಗಿ ಗಮನಿಸಿ ಸ್ವಲ್ಪ ಬೇಸರವಾಗಿದ್ದು ನಿಜ.  ಕಡ್ಡಿ ಪುಡಿ ನೋಡಿ, ಮತ್ತೆ ಹಳೆ ಸೂರಿಯ ಛಾಪು ಕಂಡಿತ್ತಾದರೂ ಆ ಚಿತ್ರದಲ್ಲಿ ರಕ್ತ ಚರಿತ್ರ ಸಿನೆಮಾದ ಘಮ ಆಡಿದ್ದರಿಂದ ಕನ್ನಡ ಚಿತ್ರ ಪ್ರೇಕ್ಷಕಳಾಗಿ ಸ್ವಾಭಿಮಾನ ಸ್ವಲ್ಪ ಕುಗ್ಗಿತ್ತು .

ಕೆಂಡಸಂಪಿಗೆ ೫ ಭಾಗಗಳಲ್ಲಿ ಮೂಡಿಬರಲಿರುವ ಹೊಸ ಪ್ರಯೋಗದ ಬಗ್ಗೆ ಕೇಳಿದ ದಿನದಿಂದ ಚಿತ್ರದ ಬಿಡುಗಡೆಗೆ ಕಾದಿದ್ದೆ .
ಭಾಗ ೨ - ಗಿಣಿ ಮರಿ ಕೇಸ್  ಮೊದಲು ತೆರೆಗೆ ಬಿಟ್ಟು ಅದರಲ್ಲಿ ಭಾಗ ೧ - ಕಾಗೆ ಬಂಗಾರಕ್ಕೆ ಕೆಲವು ಲಿಂಕ್ ಗಳನ್ನು ಅದರಲ್ಲಿರಿಸಿದ್ದಾರೆ . ಇದರಿಂದ ಮುಂದ ಬರಲಿರುವವ ಭಾಗದ ಬಗ್ಗೆ  ಹೆಚ್ಚು ಕುತೂಹಲ ಮೂಡುವುದು ಖಂಡಿತ .

ಸಿನೆಮಾದಲ್ಲಿ ಹಾಡುಗಳಿದ್ದರೂ ಕಾಲಾವಧಿ ಕೇವಲ ಒಂದೂ ಮುಕ್ಖಾಲು ಘಂಟೆಗಳಷ್ಟೇ ! ಎಸ್ ಸುರೇಮ್ದ್ರನಾಥ್ ಅವರು ಬರೆದ ಕಥೆಯನ್ನಾಧಾರಿಸಿದ ಈ ಚಿತ್ರ ಇತರೆ ಕಮರ್ಷಿಯಲ್ ಸಿನೆಮಾದವರ ಕಯ್ಯಿಗೆ ಸಿಕ್ಕಿದ್ದರೆ ಸಲೀಸಾಗಿ ಇನ್ನೂ ಒಂದು ಘಂಟೆ ಮೈ ಕಯ್ಯಿ ತುಂಬಿಕೊಂಡು ನೀರಸವಾಗಿ ನಮಗೆಲ್ಲ ಖಂಡಿತಾ ನಿರಾಸೆಯಾಗಿರುತಿತ್ತು . ಒಬ್ಬ ಒಳ್ಳೆಯ ನಿರ್ದೇಶಕನಿಗೆ ಸಿನಿಮಾ ಹೇಗೆ ಶುರು ಆಗಬೇಕು ಮತ್ತು ಯಾವಾಗ ಅಂತ್ಯವಾಗಬೇಕು ಅನ್ನೋದರ ಬಗ್ಗೆ ಸ್ಪಷ್ಟ ಆಲೋಚನೆ ಇರುತ್ತೆ . ಅದು ಸೂರಿಗೆ ಖಂಡಿತಾ ಇದೆ ಅನ್ನೋದು ಈ ಚಿತ್ರದಲ್ಲಿ ಎದ್ದು ಕಾಣುತ್ತದೆ. ಸಾಮಾನ್ಯ ಜನರಲ್ಲಿ ಇರಲಾರದ ಕೆಲ ಅಚ್ಛರಿಗೊಳಿಸುವ ಸಾಮಾಜಿಕ ಮಾಹಿತಿ - ಅಂಶಗಳನ್ನು ಸುಂದರ ಪ್ರೇಮಿಗಳ ಕಥೆಯಲ್ಲಿ ಬೆರೆಸಿ ಬಡಿಸುವ ಚಿತ್ರ ಗಿಣಿ ಮರಿ ಕೇಸ್. 

ಸರಳ ಸಾಧಾರಣವಾಗಿಯೇ ಇರುವ ಚಿತ್ರೀಕರಣದಲ್ಲಿ ಅದ್ಭುತ ದ್ರುಶ್ಯಾನುಭವ ನೀಡುವ ಸೂರಿಯಾ ಛಾಪು ಬೆಳ್ಳಿ ತೆರೆಗೆ ಮರಳಿರುವುದು ಸಂತಸದ ವಿಷಯ. 
ಹೊಸ ಪ್ರತಿಭೆಗಳಾದ ವಿಕ್ಕಿ ಮತ್ತು ಮಾನ್ವಿತ ತಮ್ಮ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ವದಗಿಸಿದ್ದು ರಾಜೇಶ್ ನಟರಂಗ ಹಾಗು ಶೀತಲ್ ಶೆಟ್ಟಿ ಪೋಷಕ ನಟರಾಗಿ ಕಥೆಗೆ ಬೆನ್ನೆಲುಬಾಗಿ ನಿಂತಿದ್ದಾರೆ . 
ನಾಲ್ಕೇ ಹಾಡುಗಳಿದ್ದರೂ ಅದ್ಭುತವಾಗಿ ಸಂಯೋಜಿಸಿರುವ  ಹರಿ ಕೃಷ್ಣ ಅವರ ಮಿಕ್ಕೆಲ್ಲ ಸಿನಿಮಾ ಹಾಡುಗಳಿಗಿಂತ ವಿಭಿನ್ನವಾದ ಶೈಲಿ ಸಾಮರ್ಥ್ಯ ತೆರೆದಿಟ್ಟಿದ್ದಾರೆ . 
ಕಥೆಗೆ ಪೂರಕವಾಗಿರುವ ಹಾಡುಗಳ ಲಿರಿಕ್ಸ್ ಮತ್ತೆ ಮತ್ತೆ ಕೇಳುವಂತೆ ಮಾಡುವಷ್ಟು ಆಳವಾಗಿವೆ . 
ನೂರು ನಿಮಿಷಗಳಲ್ಲಿ ಕರ್ನಾಟಕದ ಏಳು ಜಿಲ್ಲೆಗಳನ್ನು ಅತಿ ರಮ್ಯವಾಗಿ ಸೆರೆ ಹಿಡಿದಿರುವ ಸತ್ಯ ಹೆಗ್ಡೆ , ಅತ್ತಿತ್ತ ಅಲುಗದಷ್ಟು ಹಿಡಿದಿಡುವ ಕಥೆಯನ್ನು ಬಿಡಿಸಿರುವ ಸುರೇಮ್ದ್ರನಾಥ್ ಇಬ್ಬರೂ ಚಿತ್ರದ ಯಶಸ್ಸಿಗೆ ಸಮಾನವಾಗಿ ಕಾರಣರಾಗಿದ್ದಾರೆ . 

ಈ ಚಿತ್ರವನ್ನ ನೀವು ಯಾಕೆ ನೋಡಲೇ ಬೇಕು -
  • ಕಲಾವಿದರು ತಂತ್ರಜ್ಞರು ಹಾಡು ಸಂಭಾಷಣೆ ಚಿತ್ರೀಕರಣ ಎಲ್ಲವೂ ಸಂಪೂರ್ಣವಾಗಿ ಕರ್ನಾಟಕ ಕನ್ನಡ ಹಾಗು ಕನ್ನಡಿಗರನ್ನೇ ಒಳಗೊಂಡಿದೆ 
  • ಪ್ರೇಕ್ಷಕನ ಸಮಯಕ್ಕೆ ಬೆಲೆ ಕೊಟ್ಟು ಶುದ್ಧ ಮನೋರಂಜನೆಯನ್ನು ಮಾತ್ರ ಒಳಗೊಂಡ ಚಿತ್ರ 
  • ಇದಾಗಲೇ ತಿಳಿಸಿರುವ ಹಾಗೆ ಒಟ್ಟು ಐದು ಭಾಗಗಳಿರುವ ಕೆಂಡಸಂಪಿಗೆ ಪ್ರತಿ ಕಥೆಯಲ್ಲೂ ಇನ್ನೊಂದು ಕಥೆಗೆ ಲಿಂಕ್ ಹೊಂದಿದೆ 
  • ಇಡೀ ಭಾರತ ಚಿತ್ರರಂಗದಲ್ಲೇ ಇದೊಂದು ಹೊಚ್ಚ ಹೊಸ ಪ್ರಯೋಗವಾದ್ದರಿಂದ ಆರಂಭದಿಂದಲೇ ನೀವು ಇದನ್ನು ಪ್ರೋತ್ಸಾಹಿಸಿದಿರಿ ಎಂಬ ತೃಪ್ತ ಭಾವಕ್ಕೆ 


Tuesday, August 18, 2015



ಏಳು ಬೇಳುಗಳನೆಲ್ಲ ಸಮನಾಗಿ ಕಾಣಬಲ್ಲ ಉಪೇಂದ್ರ, ಬೆಳೆದು ಬಂದ ಹಾದಿ ಅನ್ನೋಕ್ಕಿಂತ - ನಡೆದು ಬಂದ ಹಾದಿಯನ್ನು ಗಮನಿಸಿದರೆ ಇವರು REAL STAR ಯಾಕೆ ಅನ್ನೋದು ಅರ್ಥವಾಗುತ್ತೆ . ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಯುವಕನಾದಾಗಿನಿಂದ ಒಬ್ಬ ಗೃಹಸ್ತನಾಗಿ ಜವಾಬ್ದಾರಿಗಳನ್ನ ನಿಭಾಯಿಸುವ ವರೆಗೂ ತಾನು ಕಂಡುಕೊಂಡ ಸತ್ಯಾಸತ್ಯಗಳನ್ನ ಬಗೆ ಬಗೆಯಾಗಿ ತಮ್ಮ ಪ್ರತಿಯೊಂದು ಸಿನೆಮಾದಲ್ಲಿಯೂ ಪ್ರೇಕ್ಷಕರ ಮಡಿಲಿಗೆಸೆದಿದ್ದಾರೆ .

ಉಪ್ಪಿ2 ನೋಡಿದರೆ ಅವರ ಇಂದಿನ ಐಶಾರಾಮಿ ಜೀವನಶೈಲಿಯ ನಡುವೆಯೂ ಅವರನ್ನು ಆಧ್ಯಾತ್ಮಿಕವಾಗಿ ಕಾಡಿರುವ ಕೆಲ ಸಾಮಾನ್ಯ ತರ್ಕಗಳು - ಅವುಗಳಿಗೆ ಅವರು ಕಂಡುಕೊಂಡಿರುವ ಉತ್ತರಗಳು ಎಲ್ಲವೂ ಸಿಗುತ್ತದೆ.

ಉಪೇಂದ್ರ ಸಿನೆಮಾದಲ್ಲಿ ಪ್ರಧಾನ ಪಾತ್ರವಾದ "ನಾನು" ಸುತ್ತಲೂ ಪ್ರಶ್ನೆಗಳು - ಗೊಂದಲಗಳು ಹೆಚ್ಚಿವೆ , ಹಾಗಾಗಿಯೇ ಪ್ರೇಕ್ಷಕರಿಗೆ ಅದು ಹೆಚ್ಚು ಮನೋರಂಜನೆ ನೀಡಲು ಸುಲಭವಾಗಿತ್ತೋ ಏನೋ . ಉಪ್ಪಿ 2 ಸಿನೆಮಾದಲ್ಲಿ ಪ್ರಧಾನ ಪಾತ್ರವಾದ "ನೀನು" - ಉತ್ತರಗಳನ್ನು ಬಲ್ಲವನಾಗಿರೋದಿರಿಂದಲೋ ಏನೋ , ಮೊದಲ ಅರ್ಧ ಸಿನೆಮಾ ವೇಗ ತಪ್ಪಿದಂತನಿಸುತ್ತದೆ .

ತಮ್ಮ ಅಭಿಮಾನಿಗಳನ್ನ ಆಳವಾಗಿ ಅರ್ಥ ಮಾಡ್ಕೊಂಡಿರೋ ಉಪ್ಪಿ , ಹಾಡಲ್ಲಿ ಹೀಗಂತಾರೆ -

"ಕುತ್ತೆ ಥರ ನೀಯತ್ತಿಂದ ಕತ್ತೆ ಥರ ಕೆಲಸ ಮಾಡೊ ನಂಗೆ , ಪ್ರಾಣ ಒತ್ತೆ ಇಟ್ಟು , ಅಭಿಮಾನ ಅನ್ನೋ ಮತ್ತಲ್ಲಿ ನಿರೀಕ್ಷೆ ಅನ್ನೋ ಬೆಟ್ಟ ಹಿಡ್ಕೊಂಡು ಕಾದು , ನಾನಾಡೋ ಮಾತಲ್ಲಿ ಮುತ್ತು ಹುಡ್ಕಿ ಅದನ್ನ ಲೈಫ್ ಅಲ್ಲಿ ಮೆತ್ಕೊಂಡು , ಕತ್ತೆತ್ಕೊಂಡು ಓಡಾಡೊ ಸ್ವಾತಿ ಮುತ್ತಿನಂಥ ಸಕ್ಕತ್ ಸ್ವಾಭಿಮಾನಿಗಳು "

ಅವರು ಹೇಳಿರೋ "ಬೆತ್ತ ಹಿಡಿದು ಕಾಯೋ" ಅಭಿಮಾನಿಗೆ ರುಚಿಸದ ಕೆಲ ಅಂಶಗಳು -
ಒಂದೆರೆಡು ಹಾಡು ಬಿಟ್ಟರೆ ,ಈ ಬಾರಿ ಗುರು ಕಿರಣ್ ಅವರ ಮೋಡಿ ಸಪ್ಪೆಯಾಗಲು , ನಿರೀಕ್ಷಿಸಿದಷ್ಟು ಸ್ವಾರಸ್ಯವಿಲ್ಲದ ಲಿರಿಕ್ಸ್ ಕೂಡ ಕಾರಣವಿರಬಹುದು. ಪ್ರೇಕ್ಷಕನನ್ನ ಹಿಡಿದಿಡಲು ಉಪ್ಪಿಗೆ ಹಿಂದೆಂದೂ ನಾಯಕಿಯರ ನೆರವು ಬೇಕಿರಲಿಲ್ಲ , ಆದರೆ ಈ ಸಿನಿಮಾದಲ್ಲಿ ಆ ಪ್ರಯತ್ನವೂ ನಡೆಸಿದಂತೆ ತೋರುತ್ತದೆ . ಖರ್ಚು ಮಾಡಲು ಗಿಂಜುವ ನಿರ್ಮಾಪಕರಿಂದ ಉಪ್ಪಿಯಂತಹ ನಿರ್ದೇಶಕನ ಕಲೆಗೆ ಕಡಿವಾಣವಾಯ್ತು ಅನ್ಕೊಂಡ ಅಭಿಮಾನಿಗಳು ಈ ಬಾರಿ ಅವರದೇ ನಿರ್ಮಾಣದ ಸಿನಿಮಾದಲ್ಲಿ ಇನ್ನೂ ಹೆಚ್ಚು ಹೆಚ್ಚು ಪ್ರಯೋಗಗಳನ್ನ ಅಪೇಕ್ಷಿಸಿದ್ದರು . ಅಲ್ಲಿಯೂ ನಿರೀಕ್ಷೆಗೆ ಸ್ವಲ್ಪ ನಿರಾಶೆಯೇ !

ತಮ್ಮ ಸಿನೆಮಾನ ತಾವೇ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಹತ್ತು ಹಲವು ಬಾರಿ ವಿಶ್ಲೇಷಿಸುವ ಅಭ್ಯಾಸವಿರೋ ಉಪೇಂದ್ರ ಅವರಿಗೂ ಇವೆಲ್ಲಾ ತಿಳಿದಿದ್ದರಿಂದಲೇ ಬಹುಷಃ ಪೋಸ್ಟರ್ ಗಳಲ್ಲಿ "Expectation is injurious to health!" ಅಂತ ಹಾಕಿದ್ದಾರೆ, ಅದರ ಒಳ ಅರ್ಥ ಸಿನೆಮಾದ ವಿಷಯಕ್ಕೂ ಸಹ ಹೊಂದೋದರಿಂದ ಇದು ಮತ್ತದೇ 2D ಗಿಮಿಕ್ ಆಗಿ ಪರಿಣಮಿಸಿದೆ .

ಉಪ್ಪಿ 2 ಚಿತ್ರ ಉಪೇಂದ್ರ ಚಿತ್ರದ "ಏನಿಲ್ಲ ಏನೇನಿಲ್ಲ " ಹಾಡಿನ ಸಾಲಿನಂತೆ .
ಪಾತ್ರಗಳನ್ನು ಒಂದು ಕಥೆಗೆ ನಿಲುಕಿಸಿ ನೋಡೋ ಸಾಮಾನ್ಯ  (ಉಪೇಂದ್ರ ಅವರ ಹಿಂದಿನ ಚಿತ್ರಗಳನ್ನು ಅರ್ಥೈಸಿಕೊಳ್ಳದ/ ಅರ್ಥೈಸಿಕೊಳ್ಳಲಾರದ) ಪ್ರೇಕ್ಷಕನಿಗೆ ಇದು ಬಹಳಾ ಸಪ್ಪೆ ಸಿನೆಮಾ ಅಂತ ಭಾಸವಾಗುತ್ತೆ .
ಉಪೇಂದ್ರ , ಆಪರೇಶನ್ ಅಂತ , H2O ಅಂತಹಾ ಸಿನೆಮಾಗಳನ್ನ ಪದೇ ಪದೇ ನೋಡಿ ಅದರ ವಿವಿಧ ದ್ರಿಷ್ಟಿ ಕೋನಗಳನ್ನು ಸವಿದವರಿಗೆ ಉಪ್ಪಿ 2 ಹೇಳ ಬಯಸುವ ಎರೆಡನೇ ಆಯಾಮದ ಒಳ ಅರ್ಥಗಳು ಕಾಡಿ ಕಾಡಿ ಅವರನ್ನು ಮತ್ತೆ ಮತ್ತೆ ಚಿತ್ರ ವೀಕ್ಷಿಸುವಂತೆ ಒತ್ತಾಯಿಸುತ್ತದೆ .

ಹೇಗೆ ಒಬ್ಬ ಕವಿಯ ಕಾವ್ಯ , ಕಲೆಗಾರನ ಚಿತ್ರಕಲೆ ಪ್ರೇಕ್ಷಕನಿಗೆ ತನ್ನದೇ ಆದ ಅರ್ಥ ಕಲ್ಪಿಸಿಕೊಳ್ಳುವ ಅಥವಾ ಕಂಡುಕೊಳ್ಳುವ ಸ್ವಾರಸ್ಯ ನೀಡುತ್ತವೆಯೋ ಹಾಗೇ ಉಪ್ಪಿ 2 ಪ್ರೇಕ್ಷಕರ ಕ್ರಿಯಾಶೀಲತೆ ಹಾಗು ಯೋಚನಾಶಕ್ತಿಗೆ ತನ್ನ ಭಾವಾರ್ಥ ಕಂಡುಕೊಳ್ಳುವ ಅವಕಾಶ ನೀಡಿದೆ . ಚಿತ್ರ ಗೆದ್ದರೂ ಸೋತರೂ ಇದರ ನಿಜವಾದ ಮಜಾ ಅನುಭವಿಸುವ ಉಪೇಂದ್ರ ಅಭಿಮಾನಿಗಳಿಗೆ ದಕ್ಕಬೇಕಾದ thrill ದಕ್ಕೆ ದಕ್ಕುತ್ತದೆ .


Friday, July 10, 2015



ರಂಗಿ ತರಂಗ 



ಒಂದು ದಿನಾ online booking full ಆಗಿದೆ ಎಂಬ ಕಾರಣ ನಾಳೆ ಹೋಗೋಣ ಅಂದ್ಕೊಂಡ್ವಿ . ಮಾರನೆ ದಿನ mall ಒಂದರಲ್ಲಿ chance ತೊಗೊಂಡ್ವಿ . week day ಅದೂ mall ನಲ್ಲಿ ಅದೂ ಕನ್ನಡ ಸಿನಿಮಾ HOUSE FULL ಕಂಡದ್ದು ಇದೇ ಮೊದಲ ಬಾರಿ ! ಟಿಕೆಟ್ ಸಿಗಲಿಲ್ಲ ಎಂಬ ಬೇಸರಕ್ಕಿಂತ ಕನ್ನಡ ಸಿನಿಮಾ ಇಷ್ಟು ಜನಪ್ರಿಯವಾಗಿರುವುದರ ಬಗ್ಗೆ ಖುಷಿ ಆಯ್ತು . ಮತ್ತೆ ಮಾರನೆ ದಿನ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿ ಹೋಗಿ ಕೂತರೆ ನಮ್ಮ ಪಕ್ಕದ ಸೀಟ್ ನಲ್ಲಿದ್ದ ಜೋಡಿ ಕೂಡ ಹಿಂದಿನ ದಿನ ನಮ್ಮ ಹಿಂದೆ ಕ್ಯೂ ನಿಂತು house full board ನೋಡಿ ಹೋದವರೇ ಆಗಿದ್ರು !


ತುಳು ನಾಡಿನ  ಇನ್ನೊಂದು ಮುಖ ಈ ವರ್ಷ ಕನ್ನಡ ಚಿತ್ರ ವೀಕ್ಷಕರಿಗೆ ಅರ್ಪಣೆ. ಅಲೆಗಳ ತುಣುಕುಗಳಿಲ್ಲದೆಯೇ ಅಲ್ಲಿನ ಸುಂದರ ರಂಗುಗಳನ್ನು ತುಂಬಿಕೊಂಡಿದೆ . ದಟ್ಟ ಹಸಿರು, ಭೂತ ಕೋಲ , ಪುಟ್ಟ ಪುಟ್ಟ ದ್ವೀಪಗಳ ಸೇರಿಸುವ ನದಿ ನೀರು , ದೋಣಿ ಎಲ್ಲವನ್ನು ಪಕ್ವವಾಗಿ ಹಿಡಿದಿಡುವ 90ರ ದಶಕಟ ಜನಪ್ರಿಯ ಧಾರಾವಾಹಿಯ “ಡೆನ್ನಾನಾ ಡೆನ್ನಾನಾ …” ಹಾಡು ಎಲ್ಲವೂ ರೋಚಕ .  lance kaplan , william david ಅವರ ಅಧ್ಭುತ ಛಾಯಾಗ್ರಹಣಕ್ಕೆ ತಕ್ಕಂತೆ  ಉಳಿದವರು ಕಂಡಂತೆ ಖ್ಯಾತಿಯ  ಅಜನೀಶ್ ಲೋಕನಾಥ್ ತಮ್ಮ ಹಿನ್ನೆಲೆ ಸಂಗೀತವನ್ನು ಹೊಂದಿಸುವುದರಲ್ಲಿ ಎಲ್ಲೂ ತಪ್ಪಿಲ್ಲ .


ಒಂದೆ ಪಾತ್ರಕ್ಕೆ ಹಲವು ಹೆಸರುಗಳ ಹಚ್ಚಿರುವ ರಂಗಿ ತರಂಗ ಒಂದೇ ಚಿತ್ರದ ಟಿಕೇಟ್ ದುಡ್ಡಿಗೆ ೪ ಕಥೆಗಳ ರಂಜನೆ ಒದಗಿಸುತ್ತದೆ.
ಇಷ್ಟು ಅದ್ಭುತವಾಗಿ ಹೆಣೆದಿರುವ ಕಥೆಯನ್ನು ಇನ್ನೂ ಕ್ರಿಯಾಶೀಲವಾಗಿ ಪ್ರಸ್ತುತ ಪಡಿಸಬಹುದಿತ್ತೇನೋ! ೪ ಮುಖ್ಯ ಪಾತ್ರಗಳ ಸುತ್ತಾ ಹೆಣೆದಿರುವ ಈ ನಾಲ್ಕು ಕಥೆಗಳ ಚಿತ್ರಕಥೆಯೇ ಜನರ ಗಮನ ಮನಸ್ಸು ಹಾಗು ಪ್ರಶಂಸೆಗಳನ್ನು ಸೂರೆಗೊಳ್ಳುತ್ತದೆ . ಚದುರಿದ ಚುಕ್ಕಿಗಳ ಜೋಡಿಸಿ ಪೂರ್ಣ ಚಿತ್ತಾರ ಬಿಡಿಸಿ ಚಿತ್ರಮಂದಿರದಿಂದ ಹೊರ ಬರುವ ಪ್ರೇಕ್ಷಕ, ಎರೆಡು ವರೆ ಘಂಟೆಯಲ್ಲಿ ತಾನು ಇಷ್ಟೆಲ್ಲಾ ಅನುಭವಗಳನ್ನು ಪಡೆದು , ನಾಲ್ಕೂ ಕಥೆಗಳನ್ನು ಅರಗಿಸಿಕೊಂಡ ಬಗ್ಗೆ ಹೆಮ್ಮೆ ಪಡುವುದು ಸತ್ಯ . ಇಂತಹಾ ಅದ್ಭುತ ಚಿತ್ರ ಮಾಡಿದ ಅನೂಪ್ ಮತ್ತು ತಂಡಕ್ಕೆ ನಿಜವಾಗಿಯೂ ಬೆನ್ನು ತಟ್ಟಬೇಕು .


Dialogue king ಗೆ ತಮ್ಮ ಪಯಣದಲ್ಲಿ ಬಹುಷಃ ಈ ಕಮರೊಟ್ಟು ಗ್ರಾಮದ  ಪೋಸ್ಟ್ ಮಾಸ್ಟರ್ ಪಾತ್ರ ತೀವ್ರ ಧರ್ಮ ಸಂಕಟಕ್ಕೆ ಸಿಲುಕಿಸಿದ್ದಿರಬೇಕು , ಆ ಜಾಗದ ಮಾತಿನ ಶೈಲಿ ಹಿಡಿದರೆ ತಮ್ಮ ಶೈಲಿಯನ್ನೇ ಕಳೆದುಕೊಳ್ಳಬೇಕು ಅಥವಾ ತಮ್ಮ ಛಾಪನ್ನು ಜನರನ್ನು ಸೆಳೆಯಲು ರಂಜಿಸಲು ಉಪಯೋಗಿಸಿದರೆ ಪಾತ್ರಕ್ಕೆ ನ್ಯಾಯ ಒದಗಿಸದ ಅಪವಾದ ಹೊರಬೇಕು !
ಮೊದಲ ಬಾರಿಗೆ ಬೆಳ್ಳಿ ಪರದೆ ಏರಿರುವ ನಟರ ಅಭಿನಯ ಅಷ್ಟಕ್ಕಷ್ಟೇ ಎನಿಸಿದರೂ , ಕಥೆ ಮುಂದೆ ಸಾಗುತ್ತಾ ಮುಗಿಯುತ್ತಾ , ಎಲ್ಲೋ ಒಂದು ಕಡೆ ಆ ಪಾತ್ರಗಳ ನಡುವಿನ ಸಂಬಂಧಗಳ ಸತ್ಯಾಸತ್ಯಗಳಿಗೆ ತಕ್ಕಂತೆಯೇ ಅಭಿನಯ ಹೊಂದಿಕೊಂಡಿದೆ ಎಂದೆನಿಸಿತು .


ಇಷ್ಟೆಲ್ಲಾ ರೋಮಾಂಚನಕಾರಿ ಅಂಶಗಳಿರುವ ಪ್ರಾಮಾಣಿಕ ಕನ್ನಡ ಚಿತ್ರ ಈ ಸಮಯದಲ್ಲಿ ಬಿಡುಗಡೆ ಆಗಿರುವುದರಿಂದ ನನ್ನ ಮನದಾಳದ ಪ್ರಾರ್ಥನೆ ಇದೂ ಕೂಡ “ಬಲಿ” ಆಗದೆ ಇರಳಪ್ಪಾ ದೇವರೆ!